kic-banner
 
 
ಮೂಲಭೂತ ವಿವರಣೆ
ಅಂಶಗಳು ಕಾಯ್ದೆಯ ಪ್ರಕರಣಗಳು ದೂರುಗಳು/ಮೇಲ್ಮನವಿ ದಂಡನೆಗಳು
 
ಕಾಯ್ದೆ ಬಗ್ಗೆ ಪ್ರಮುಖ ಅಂಶಗಳು: ಮೇಲ್ಮನವಿ
 
ಪ್ರಕರಣ 19: ಫೀರ್ಯಾದು/ಮೇಲ್ಮನವಿ
 
1.
7ನೇ ಪ್ರಕರಣದ (1) ನೇ ಉಪ-ಪ್ರಕರಣದಲ್ಲಿ ಅಥವಾ (3) ನೇ ಉಪಪ್ರಕರಣದ (ಎ) ಖಂಡದಲ್ಲಿ ನಿರ್ಧಿಷ್ಟಪಡಿಸಲಾದ ಸಮಯದೊಳಗೆ ನಿರ್ಣಯವನ್ನು ಸ್ವೀಕರಿಸದಿರುವಂಥ ಅಥವಾ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿರ್ಣಯದಿಂದ ಬಾಧಿತನಾದಂಥ ಯಾರೇ ವ್ಯಕ್ತಿಯು, ಅಂಥ ಅವಧಿಯು ಮುಕ್ತಾಯಗೊಂಡಂದಿನಿಂದ ಅಥವಾ ನಿರ್ಣಯದಿಂದ ಸ್ವೀಕರಿಸಿದ ದಿನದಿಂದ ಮೂವತ್ತು ದಿನಗಳೊಳಗೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಹಿರಿಯ ದರ್ಜೆಯ ಅಧಿಕಾರಿಗೆ ಅಪೀಲು ಸಲ್ಲಿಸಬಹುದು: ಪರಂತು, ಅಪೀಲುದಾರನು, ಸಕಾಲದಲ್ಲಿ ಅಪೀಲು ಸಲ್ಲಿಸಲು ಸಾಕಷ್ಟು ಕಾರಣದಿಂದ ಪ್ರತಿಬಂಧಿತನಾಗಿದ್ದಾನೆಂದು ಅಧಿಕಾರಿಗೆ ಮನದಟ್ಟಾದರೆ ಅಂಥ ಅಧಿಕಾರಿಯು ಮೂವತ್ತು ದಿನಗಳ ಅವಧಿ ಮುಗಿದ ತರುವಾಯ ಅಪೀಲನ್ನು ಸ್ವೀಕರಿಸಬಹುದು.
 
2.
ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ಒಬ್ಬ ರಾಜ್ಯ ಮಾಹಿತಿ ಅಧಿಕಾರಿಯು ಮೂರನೇ ಪಕ್ಷದಾರನ ಮಾಹಿತಿಯನ್ನು ಬಹಿರಂಗಪಡಿಸುವಂತೆ 11ನೇ ಪ್ರಕರಣದ ಮೇರೆಗೆ ಮಾಡಿದ ಆದೇಶದ ವಿರುದ್ದ ಅಪೀಲು ಸಲ್ಲಿಸಿದಲ್ಲಿ ಸಂಬಂಧಪಟ್ಟ ಮೂರನೇ ಪಕ್ಷದಾರನು ಆದೇಶದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಅಪೀಲು ಸಲ್ಲಿಸತಕ್ಕದ್ದು.
 
3.
(1)ನೇ ಉಪಪ್ರಕರಣದ ಮೇರೆಗಿನ ನಿರ್ಣಯದ ವಿರುದ್ದ ಸಲ್ಲಿಸುವ ಎರಡನೇ ಅಪೀಲನ್ನು, ಕೇಂದ್ರ ಮಾಹಿತಿ ಆಯೋಗ ಅಥವಾ ರಾಜ್ಯ ಮಾಹಿತಿ ಆಯೋಗವು ನಿರ್ಣಯವನ್ನು ಮಾಡಬೇಕಿದ್ದ ಅಥವಾ ವಾಸ್ತವವಾಗಿ ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು: ಪರಂತು, ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗಕ್ಕೆ ಅಪೀಲುದಾರನು ಸಕಾಲದಲ್ಲಿ ಅಪೀಲನ್ನು ಸಲ್ಲಿಸಲು ಯುಕ್ತ ಕಾರಣದಿಂದ ಪ್ರತಿಬಂಧಿತನಾಗಿದ್ದಾನೆಂದು ಮನದಟ್ಟಾದರೆ, ತೊಂಭತ್ತು ದಿನಗಳ ಅವಧಿಯು ಮುಗಿದ ತರುವಾಯ ಆ ಅಪೀಲನ್ನು ಸ್ವೀಕರಿಸಬಹುದು.
 
4.
ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಡಿದ ಯಾವ ನಿರ್ಣಯದ ವಿರುದ್ದ ಅಪೀಲು ಸಲ್ಲಿಸಲಾಗಿದೆಯೋ ಅದು ಮೂರನೆಯ ಪಕ್ಷದಾರನ ಮಾಹಿತಿಗೆ ಸಂಬಂಧಿಸಿದ್ದರೆ, ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು ಮೂರನೆಯ ಪಕ್ಷದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ನೀಡತಕ್ಕದ್ದು.
5.
ಯಾವುದೇ ಅಪೀಲು ವ್ಯವಹರಣೆಗಳಲ್ಲಿ, ಕೋರಿಕೆಯ ನಿರಾಕರಣೆ ಸಮರ್ಥನೀಯವಾಗಿತ್ತು ಎಂಬುದನ್ನು ರುಜುವಾತುಪಡಿಸುವ ಹೊಣೆ, ಕೋರಿಕೆಯನ್ನು ನಿರಾಕರಿಸಿದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮೇಲೆ ಇರತಕ್ಕದ್ದು.
6.
(1)ನೇ ಉಪಪ್ರಕರಣದ ಅಡಿಯಲ್ಲಿ ಅಥವಾ (2)ನೇ ಉಪಪ್ರಕರಣದ ಅಡಿಯಲ್ಲಿ ಸಲ್ಲಿಸಲಾದ ಅಪೀಲನ್ನು, ಅದನ್ನು ಸ್ವೀಕರಿಸದ ಮೂವತ್ತು ದಿನಗಳೊಳಗೆ ಅಥವಾ ಸಂದರ್ಭನುಸಾರ, ಅದನ್ನು ಸಲ್ಲಿಸಿದ ದಿನಾಂಕದಿಂದ ಒಟ್ಟು ನಲವತ್ತೈದು ದಿನಗಳನ್ನು ಮೀರದ ಹಾಗೆ ವಿಸ್ತರಿಸಿದ ಅವಧಿಯೊಳಗೆ ವಿಲೆ ಮಾಡಿ ಅದರ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸತಕ್ಕದ್ದು.
7.
ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗದ ನಿರ್ಣಯಗಳು ಬಂಧಕವಾಗಿರತಕ್ಕದ್ದು.
8.
ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು, ತನ್ನ ನಿರ್ಣಯದಲ್ಲಿ:- (ಎ) ಈ ಅಧಿನಿಯಮದ ಉಪಬಂಧಗಳನ್ನು ಪಾಲಿಸುವಂತೆ ಮಾಡಲು ಈ ಮುಂದಿನವುಗಳನ್ನು ಒಳಗೊಂಡಂತೆ ಅವಶ್ಯವಾಗಬಹುದಾದಂಥ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕ ಪ್ರಾಧಿಕಾರವನ್ನು ಅಗತ್ಯಪಡಿಸುವ ಅಧಿಕಾರವನ್ನು ಹೊಂದಿರುತ್ತದೆ. (1) ನಿರ್ಧಿಷ್ಟ ರೀತಿಯಲ್ಲಿ ಮಾಹಿತಿ ಪಡೆಯಲು ಅವಕಾಶ ನೀಡುವಂತೆ ಕೋರಿದರೆ ಆ ರೀತಿಯಲ್ಲಿ ಮಾಹಿತಿ ಪಡೆಯಲು ಅವಕಾಶ ನೀಡುವುದು; (2) ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದರ್ಭನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವುದು. (3) ಕೆಲವು ಮಾಹಿತಿಯನ್ನು ಅಥವಾ ಮಾಹಿತಿಯ ಪ್ರವರ್ಗಗಳನ್ನು ಪ್ರಕಟಿಸುವುದು, (4) ದಾಖಲೆಗಳ ನಿರ್ವಹಣೆ, ವ್ಯವಸ್ಥಾಪನೆ ಮತ್ತು ನಾಶಕ್ಕೆ ಸಂಬಂಧಿಸಿದಂತೆ ತಾನು ಅನುಸರಿಸುತ್ತಿರುವ ಪದ್ಧತಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು; (5) ಮಾಹಿತಿ ಹಕ್ಕಿನ ಬಗ್ಗೆ ತನ್ನ ಅಧಿಕಾರಿಗಳಿಗೆ ತರಬೇತಿ ಅವಕಾಶವನ್ನು ಹೆಚ್ಚಿಸುವುದು; (6) 4ನೇ ಪ್ರಕರಣದ (1)ನೇ ಉಪಪ್ರಕರಣದ (ಬಿ) ಖಂಡದ ಪ್ರಕಾರ ವಾರ್ಷಿಕ ವರದಿಯೊಂದನ್ನು ಅದಕ್ಕೆ ಒದಗಿಸುವುದು. (ಬಿ) ಯಾವುದೇ ನಷ್ಟ ಅಥವಾ ಇತರ ಹಾನಿಗಾಗಿ ಫಿರ್ಯಾದುದಾರನಿಗೆ ನಷ್ಟಪರಿಹಾರ ನೀಡುವಂತೆ ಸಾರ್ವಜನಿಕ ಪ್ರಾಧಿಕಾರವನ್ನು ಅಗತ್ಯಪಡಿಸುವುದು; (ಸಿ) ಈ ಅಧಿನಿಯಮದ ಅಡಿಯಲ್ಲಿ ಉಪಬಂಧಿಸಲಾದ ಯಾವುದೇ ಒಂದು ದಂಡನೆಯನ್ನು ವಿಧಿಸುವುದು; (ಡಿ) ಅರ್ಜಿಯನ್ನು ತಿರಸ್ಕರಿಸುವುದು
9.
ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು, ಫಿರ್ಯಾದುದಾರನಿಗೆ ಮತ್ತು ಸಾರ್ವಜನಿಕ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸುವ ಹಕ್ಕು ಸೇರಿದಂತೆ ತನ್ನ ನಿರ್ಣಯವನ್ನು ತಿಳಿಸತಕ್ಕದ್ದು.
10.
ಕೇಂದ್ರ ಮಾಹಿತಿ ಆಯೋಗ ಅಥವಾ ಸಂದರ್ಭನುಸಾರ, ರಾಜ್ಯ ಮಾಹಿತಿ ಆಯೋಗವು ನಿಯಮಿಸಬಹುದಾದಂಥ ಪ್ರಕ್ರಿಯೆಗನುಸಾರವಾಗಿ ಅಪೀಲಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳತಕ್ಕದ್ದು.